Thursday, September 14, 2006

ಪೈಂಟು, ಸುಣ್ಣ-ಬಣ್ಣ, ಪ್ರಾಣ

ಹೀಗೆ ಒಂದು ದಿನ ನಿದ್ದೆಗೆ ಹೊರಟಾಗ ನಮ್ಮ ಚಿಣ್ಣಾರಿಯ ಪ್ರಶ್ನೆ ಶುರುವಾಯಿತು ನೋಡಿ. ಸರಿ, ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು ಬಲ್ಲಿರಾ.. ಓದಿ ನೋಡಿ..

: ಅಪ್ಪಾ, ಗೋಡೆಗೆ ಬಳಿಯುವ ಪೈಂಟು ಹೇಗೆ ಕಂಡುಹಿಡಿದರು?

: ಹಿಂದಿನ ಕಾಲದಲ್ಲಿ ಗೋಡೆಯನ್ನು ಮಣ್ಣಿನಿಂದ ಮಾಡುತ್ತಿದ್ದ ಕಾರಣ ಗೋಡೆಗೆ ಗೆದ್ದಲು-ಇರುವೆ ಇತ್ಯಾದಿ ಕ್ರಿಮಿ ಕೀಟಗಳು ಬರುತ್ತಿದ್ದವು. ಶುರುಶುರುವಿಗೆ ಸೆಗಣಿಯನ್ನು ಗೋಡೆಗೆ ಬಳಿದು ಇವುಗಳ ಕಾಟವನ್ನು ಹೋಗಲಾಡಿಸಿದರೆ ಕ್ರಮೇಣ ಸುಣ್ಣವನ್ನು ಬಳಸಲು ಮನುಷ್ಯ ಕಲಿತ. ನಿಧಾನದಲ್ಲಿ ಮನುಷ್ಯ ಓದಿ ತಿಳಿದು ರಾಸಾಯನಿಕ ವಸ್ತುಗಳಿಂದ ವಿವಿಧ ಪ್ರಕಾರದ ಬಣ್ಣಗಳ ಪೈಂಟನ್ನು ಕಂಡು ಹಿಡಿದ. ಈಗೀಗ ಕ್ರಿಮಿಕೀಟಗಳ ಉಪದ್ರವ ಕಡಿಮೆಯಾಗಿ ಮನೆಯ ಸೌಂದರ್ಯವರ್ಧಕವಾಗಿ ಉಪಯೋಗಿಸುವುದೇ ಹೆಚ್ಚು.

ಮ: ಈಗ ನೀವು ಹೇಳಿದಿರಲ್ಲಾ, ಸುಣ್ಣ ಮಾಡುವುದು ಹೇಗೆ?

ಅ: ಸಮುದ್ರ ತೀರದಲ್ಲಿ ನೀನು ಸುಣ್ಣದ ಚಿಪ್ಪು ನೋಡಿದ್ದಿಯಾ? ಆ ಚಿಪ್ಪನ್ನು ಬಿಸಿನೀರಿನಲ್ಲಿ ಹಾಕಿದರೆ ಒಂದು ರೀತಿಯ ಬಿಳಿಯ ಬಣ್ಣದ ಪೈಂಟಾಗುವುದು. ಅದನ್ನು ಗೋಡೆಗೆ ಬಳಿದರೆ ಬಿಳಿಯ ಬಣ್ಣ ಬರುವುದು.

: ಹಾಗಾದರೆ ಬೇರೆ ಬಣ್ಣ ಬೇಕಾದರೆ?

: ಬೇರೆ ಏನಾದರೂ ಬಣ್ಣ ಹಾಕಿದರಾಯಿತು. ಉದಾಹರಣೆಗೆ ಬಟ್ಟೆ ಒಗೆಯುವ ನೀಲಿ ಹಾಕಿದರೆ ನೀಲಿ ಬಣ್ಣ ಬರುವುದು.

: ..... ಒಂದು ವೇಳೆ ಚಿಪ್ಪು ಬೇರೆ ಬಣ್ಣದಿದ್ದರೆ?

: $#%^&.....

: (ಸ್ವಲ್ಪ ಸಮಯ ಬಿಟ್ಟು) ಅಪ್ಪಾ, ಚಿಪ್ಪಿನೊಳಗೆ ಜೀವಿಯಿದ್ದರೆ?

: ಇಲ್ಲ, ಇರುವುದಿಲ್ಲ......

: ಹೇಗೆ ಗೊತ್ತು ನಿಮಗೆ?

: ಇಲ್ಲ ಮರಿ, ಇರುವುದಿಲ್ಲ..

: ಹೇಗೆ ಗೊತ್ತು ಅಂತ, ಎಲ್ಲಾ ಚಿಪ್ಪನ್ನು ನೋಡ್ತಾರಾ, ಪ್ರ್ರಾಣಿ ಇಲ್ಲ ಅಂತ?

: ..........

ನನ್ನ ಪರಿಸ್ಥಿತಿಯನ್ನು ನೀವೇ ಆಲೋಚಿಸಿ..
(೧೨ ಸೆಪ್ಟೆಂಬರ್ ೨೦೦೬)

Wednesday, September 13, 2006

ಯುರೋಪ್ ಹಾಗೂ ತಣ್ಣನೆ...

ಇತ್ತೀಚೆಗೆ ಯುರೋಪ್ ಗೆ ಹೋಗುವ ಪುನರವಕಾಶ ಬಂತು. ಅದೆಷ್ಟು ಸಲ ಹೋಗಿದ್ದೇನೋ, ಆದರೆ ಈ ವಿಷಯವನ್ನು ಇಲ್ಲಿ ಬರೆಯಲು ಈಗ ಸಮಯ ಬಂತು ನೋಡಿ. ಪ್ರತಿ ಸಲ ಹೋದಾಗಲೂ ಈ ವಿಚಿತ್ರವನ್ನು ಅನುಭವಿಸಿದ್ದೇನೆ. ಮೊದಲೇ ಯುರೋಪ್ ಅಂದರೆ ತಣ್ಣನೆ, ಯಾವಾಗಲೂ ಚಳಿ. ಇದರೆಲ್ಲರ ಮಧ್ಯೆ ಅಲ್ಲಿ ಸಿಗುವ ಆಹಾರವೂ ಬಹಳ ತಣ್ಣನೆ. ಒಂದು ಸ್ಯಾಂಡ್‍ವಿಚ್ ಕೇಳಿದರೆ ತಂಗಳು ಪೆಟ್ಟಿಗೆಯಿಂದ ತೆಗೆದು ಹಾಗೇ ಕೊಡುತ್ತಾರಪ್ಪಾ.. ! ನಾನು ಬಾಯಿಬಿಟ್ಟು ಮೈಕ್ರೋವೇವ್ ನಲ್ಲಿಟ್ಟು ಕೊಡುತ್ತಾರೋ ಎಂದು ಕಣ್ಣು ಬಿಟ್ಟು ನೋಡಿದ್ದೇ ಬಂತು ಅಷ್ಟೇ! ಅದು ಬಿಡಿ, ಈ ಯುರೋಪಿನ ಕೆಂಪುಕೋತಿಗಳು, ಬೀಳುತ್ತಿರುವ ಮಂಜಿನ ಮಧ್ಯೆಯೂ ಐಸ್ ಕ್ರೀಮ್ ತಿನ್ನುವುದು ನೋಡಬೇಕು ನೀವು ! ನನಗೆ ಈ ಜನರ ಈ ಪ್ರವೃತ್ತಿಯನ್ನು ಇಲ್ಲಿಯವರೆಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ.

Wednesday, August 16, 2006

ನೆಂಟತನ

ನಮ್ಮ ಮಕ್ಕಳು ದೊಡ್ಡವರಾಗುತ್ತಾ ಅವಿಭಕ್ತ, ವಿಭಕ್ತ ಕುಟುಂಬದ ವಿಚಾರ ಹೇಳಬೇಕಾಗಿ ಬರುವುದು ಸಹಜ. ಒಂದು ಬಾರಿ ಹೀಗೆ ಮಾತನಾಡುತ್ತಾ ನಮ್ಮ ಕುಟುಂಬ-ನೆಂಟರಿಷ್ಟರ ಸಂಬಂಧಗಳ ಬಗ್ಗೆ ವಿವರಿಸುವ ಸಂದರ್ಭ ಬಂತು. ಹೇಗೆ ನೆಂಟರು ಅಥವಾ ನಾವು ನೆಂಟರಾಗಿ ಕೆಲವು ದಿನಗಳ ಮಟ್ಟಿಗೆ ಅವರ ಮನೆಗೆ ಹೋಗಿ ಬರುವೆವು ಅನ್ನುವ ಉದಾಹರಣೆಯೂ ಬಂತು. ನಮ್ಮ ಪುಟಾಣಿ ಇದನ್ನೇ ಆದರಿಸಿಕೊಂಡು ಒಂದು ದಿನ ತನ್ನ ಅಮ್ಮನಲ್ಲಿ ಕೇಳಿಯೇ ಬಿಟ್ಟಳು...., ಪ್ರಸಂಗ: ಜೇನು ನೊಣಗಳ ಜೀವನ

ಪು: ಅಮ್ಮ, ಹೇಗೆ ಅಷ್ಟೂ ಜೇನು ನೊಣಗಳು ಹುಟ್ಟಿಕೊಂಡದ್ದು?

ಅ: ರಾಣಿ ಜೇನು ನೊಣ ಮೊಟ್ಟೆಯಿಟ್ಟು, ಮೊಟ್ಟೆಯೊಡೆದು ಮರಿಗಳಾದುವು.

ಪು: ಹಾಗಾದ್ರೆ, ತುಂಬಾ ನೊಣಗಳಾದ್ರೆ ಅವೆಲ್ಲಾ ಇರ್ಲಿಕೆ ಈ ಗೂಡಿನಲ್ಲಿ ಸಾಧ್ಯವಾ?

ಅ: ಇಲ್ಲ. ಆಗ ಅವು ಪಾಲಾಗಿ (ವಿಂಗಡನೆ) ಹೋಗ್ತವೆ.

ಪು: (ಸ್ವಲ್ಪ ಸಮಯ ಬಿಟ್ಟು) ಹಾಗಾದ್ರೆ ಪಾಲಾಗಿ ಹೋದ ಹುಳಗಳು ನೆಂಟ್ರಾಗಿ ಅವರ ಮೊದಲ ಗೂಡಿಗೆ ಬರ್ತಾವಾ..?

: ..........

Tuesday, August 15, 2006

ಹುಲಿ ತಿಂತದೆ !

ನಾನು: ನೋಡು ! ತಂಟೆ ಮಾಡಬೇಡ, ಕಾಡಿನಲ್ಲಿರುವ ಹುಲಿಗೆ ಕೊಡುತ್ತೇನೆ ಅಷ್ಟೇ !

ಅವಳು: ಹುಲಿ ತಿಂತದಾ?

ನಾನು: ಹೌದು ಮತ್ತೇ !

ಅವಳು: ಹಾಗಾದ್ರೆ, ಹುಲಿ non-veg..?

ನಾನು: ~!#*

ಅವಳು: (ಸ್ವಲ್ಪ ಸಮಯ ಬಿಟ್ಟು) ಅಪ್ಪ, ಹಾಗಾದ್ರೆ ಹುಲಿ ನನ್ನನ್ನು ಅಂಗಿ ತೆಗೆದು ತಿಂತದಾ ಅಥವಾ ಹಾಗೆಯಾ?....

ನಾನು ತಬ್ಬಿಬ್ಬು !

Friday, August 04, 2006

ಒಂದು ಪ್ರಶ್ನೆ?

ನಿನ್ನೆ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?'
ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?

Thursday, May 04, 2006

ಭಾರತಕ್ಕೆ ಹೋಗುತ್ತಿರೇನು? ಏನೆಲ್ಲಾ ಒಯ್ಯುವಿರಿ?

ಅನಿವಾಸಿಯಾದ ನನಗೆ ಭಾರತಕ್ಕೆ ಹೊರಟಾಗಲೆಲ್ಲಾ ಈ ಸಮಸ್ಯೆ ಇದ್ದದ್ದೇ. ನನ್ನ ಮಿತ್ರ ವೃಂದ ಕೂಡಾ ಈ ಬಗ್ಗೆ ಸಾಕಷ್ಟು ಸಲ ಪ್ರಶ್ನಿಸಿದ್ದಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಏನೆಲ್ಲಾ ಅಸಾಧ್ಯ? ಕಂಪ್ಯೂಟರ್.. ಚಿನ್ನ..?

ಎಲ್ಲೋ ಒಂದು ದಿನ ಹೀಗೆ ಅಂತರ್ಜಾಲದಲ್ಲಿ ಅಡ್ಡಾಡುತ್ತಿದ್ದಾಗ ಈ ಮಾಹಿತಿ ದೊರಕಿತು ನೋಡಿ. ನಿಮಗೆ ಪ್ರಯೋಜನವಾಗುವುದೇ?

Are you traveling to India soon? What to take and what not? How much worth you can take it? Can I take a computer with me? Will I get caught?

To find out answers to all these questions click the link to download the baggage rules..

Click here

Tuesday, May 02, 2006

ಶುರು!

ಎಲ್ಲಾ ಕಡೆಯಲ್ಲಿ ಬ್ಲಾಗ್ ಬ್ಲಾಗ ಅಂತ ಕೇಳಿ ಇದೇನಪ್ಪಾ ಹೊಸ ಚಾಳಿ ಅಂತ ಅಂದೋನು ನಾನು. ಹಂ.. ಈಗ ನಾನೇ ಬರೆಯೋಣವೆಂದು ಕೀಲಿ ಮಣೆ ಕುಟ್ಟುತ್ತಿದ್ದೇನೆ. ಏನು ಬರೆಯುವೆನೆಂದು ನನಗೇ ಗೊತ್ತಿಲ್ಲ ಮತ್ತೆ ನಿಮಗೇನೆಂದು ಹೇಳಲಿ? ಒಂದಂತೂ ನಿಜ, ಈ ಬರಹಕ್ಕೆ ಸರಿಯಾದ ಕಾಲಗತಿಯಂತೂ ಹೇಳಲು ನನ್ನಿಂದ ಸಾಧ್ಯವಿಲ್ಲದ ಮಾತು! ಎನೋ, ನನ್ನ ಕೆಲವು ಅನುಭವಗಳನ್ನು, ಮಾಹಿತಿಗಳನ್ನು ಇಲ್ಲಿ ಹಂಚುತ್ತೇನೆ. ನಿಮಗೇನಾದರೂ ಪ್ರಯೋಜನವಾದರೆ ಈ ಬರವಣಿಗೆ ಸಾರ್ಥಕ.

I wasn't sure why should I write a blog. Well, I have decided to write finally. But it won't be periodic. Main intention of writing to share my experiences which others who may find it useful.