Tuesday, July 15, 2008

ಮಕ್ಕಳ ಮುಗ್ಧ ಪ್ರೀತಿ

ಇವತ್ತು ಬೆಳಗ್ಗೆ ಕಛೇರಿಗೆ ಹೊರಡ್ತಾ ನನ್ನ ಪತ್ನಿ ಊರಿನಿಂದ ತಂದ ಸಿಹಿತಿಂಡಿಯನ್ನು ಕಟ್ಟಿಕೊಟ್ಟಳು. ಇದನ್ನು ನೋಡಿದ ನಮ್ಮ ಎರಡು ವರ್ಷದ ಮಗರಾಯ ತನ್ನ ಸೇವೆಯನ್ನೂ ಮಾಡಲು ಹೊರಟ. ಅವನಿಗೆ ಸುಲಭವಾಗಿ ಸಿಗುವುದು ತಂಗಳ ಪೆಟ್ಟಿಗೆಯ (ಪ್ರಿಜ್ ) ಪ್ರೀಜರ್ ವಿಭಾಗ. ಅಲ್ಲಿರುವ ಐಸ್ ಕ್ರೀಮ್ ಅವನಿಗೆ ಅತಿ ಪ್ರೀತಿಯ ವಸ್ತು, ಅದರಿಂದ ಅವನಿಗೆ ಆ ವಿಭಾಗ ಚಿರಪರಿಚಿತ. ಅಲ್ಲಿರುವ ಶೀತಲೀಕರಿಸಿದ ತರಕಾರಿಯನ್ನು ತೆಗೆದುಕೊಂಡು ನನ್ನ ಚೀಲಕ್ಕೆ ಹಾಕಲು ಕೊಟ್ಟ. ನಾನು ಬೇಡವೆಂದರೆ, ಸ್ವಲ್ಪ ಹೊತ್ತಿನಲ್ಲಿ ಮುನಿಸಿಕೊಂಡು ತನ್ನ ಅಮ್ಮನಲ್ಲಿ ಬೇಸರವನ್ನು ತೋಡಿಕೊಂಡ. ಸರಿಯಪ್ಪಾ.... ಎಂದು ತೆಗೆದುಕೊಂಡು ಅವನಿಗೆ ಕಾಣದಂತೆ ಹೇಗೋ ಚೀಲದಲ್ಲಿ ಹಾಕುವಂತೆ ನಾಟಕ ಮಾಡಿದೆ. ಅಲ್ಲಿಗೆ ಈ ಕಥೆ ಮುಗಿಯಿತೆಂದು ಅಂದುಕೊಂಡರೆ, ಬೂಟು ಹಾಕಿಗೊಂಡು ಬಾಗಿಲ ಬಳಿ ಬಂದರೆ ನನ್ನ ಚೀಲದಲ್ಲಿ ಅವನು ಕೊಟ್ಟ ವಸ್ತು ಇಲ್ಲದುದನ್ನು ಗಮನಿಸಿ ಮತ್ತೆ ಮುನಿಸಿಗೊಂಡು ಅವನ ಅಮ್ಮನಲ್ಲಿ ದೂರನ್ನು ಕೊಡುವುದರ ಜೊತೆಗೆ ಬೇಸರಗೊಂಡ. ಅಂತೂ ಇಂತೂ ಅವನ ಅಮ್ಮ ನನ್ನ ಚೀಲದಲ್ಲಿದ್ದ ಹಸಿರು ಬಣ್ಣದ ಪುಸ್ತಕವನ್ನು ಅದೇ ಎಂದು ಸಮಾಧಾನಿಸಿದ ನಂತರ ನಾನು ಹೊರಟೆ.. !!!

Thursday, August 30, 2007

ದೀಪ


ದೀಪ
Originally uploaded by avilu
ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ.

ಅವನ ಮನೆಯಲ್ಲಿದ್ದ ದೇವರ ದೀಪ ನನ್ನ ಕಣ್ಸೆಳೆಯಿತು. ದೀಪದ ಬೆಂಕೆಯ ಜ್ವಾಲೆ, ಅದರ ಸುತ್ತಲೂ ಹರಡಿರುವ ಪ್ರಭಾವಳಿಯನ್ನು ನೋಡುತ್ತಾ ನನ್ನ ಕ್ಯಾಮರಾ ಕ್ಲಿಕ್ ಎಂದಿತು !

Friday, March 09, 2007

ಮೂಲಭೂತ ಪ್ರಶ್ನೆ !

ದೇವರು ಹಾಗೂ ನನ್ನ ಮಧ್ಯೆ ನಡೆಯುವ ಮಾತುಕತೆ ಅಷ್ಟಕ್ಕಷ್ಟೆ. ಯಾಕೆಂದರೆ ಅವನು ಮಾತನಾಡಲಾರ, ನಾನು ಮಾತನಾಡಿಸಲಾರೆ ! ನಮ್ಮ ಮಧ್ಯೆಈ ಕಂದರ ಮೊದಲಿನಿಂದಲೇ ಇದೆ. ಈ ಶೀತಲ ಸಮರ ಮೊದಲಿನಿಂದಲೇ ಇದ್ದರೂ ಅಪರೂಪಕ್ಕೊಮ್ಮೆ ದೇವಸ್ಥಾನಕ್ಕೆ ಭೇಟಿ ಕೊಡುವುದು ಬೆಳೆದುಬಂದಿದೆ. ಸ್ಥಳಾವಕಾಶ ಕಡಿಮೆಯಾದ ಈ ದೇಶದಲ್ಲಿ ಭಕ್ತರು ನಿರಾಶಾರಾಗದಂತೆ ಎಲ್ಲಾ ದೇವರನ್ನು ಒಂದೇ ಕಡೆ ಕೂಡಿಹಾಕಿರುತ್ತಾರೆ. ಯಾರಿಗೆ ಯಾವ ದೇವರು ಬೇಕೋ ಅವರು ಆ ದೇವರಿರುವಲ್ಲಿ ಹೋಗಿ ನಿಮ್ಮ ನಿವೇದನೆಯನ್ನು ಮಾಡಿಕೊಳ್ಳಬಹುದು. ಬಹುಶ: ಈ ದೆಸೆಯಿಂದ ದೇವರುಗಳ ಮಧ್ಯೆ ಮತ್ಸರ ಬಾರದಿದ್ದರೆ ಸಾಕು, ಅಷ್ಟೇ ! ವಿಷಯ ಪ್ರಸ್ತಾವನೆಯ ಮೊದಲು ಪೀಠಿಕೆಯೇ ಉದ್ದವಾದರೆ ಹೇಗೆ ಮಾರಾಯರೇ?

ಮೊನ್ನೆ ಸಂಕ್ರಾಂತಿಯ ಶುಭ ದಿನದಂದು ನನ್ನ ಪುಟ್ಟ ಮಗಳನ್ನು ಕರಕೊಂಡು ದೇಗುಲಕ್ಕೆ ಹೋಗಿದ್ದೆ.

ಅಲ್ಲಿ ಒಂದು ಕಡೆ ಕೆಂಪು ನಾಲಿಗೆ ಚಾಚಿಕೊಂಡಿರುವ ಕಾಳಿಯ ವಿಗ್ರಹ, ಇನ್ನೊಂದು ಕಡೆ ಹಿರಣ್ಯ ಕಷಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ನರಸಿಂಹನನ್ನು ನೋಡಿ ನನ್ನ ಮಗಳ ಪ್ರಶ್ನೆ, ’ಅಪ್ಪಾ, ದೇವರು ನಾನ್ ವೆಜ್..ಅ.. ?'

ಮನೆಯಲ್ಲಿ ನಾವೇಕೆ ವೆಜ್ - ವೆಜ್ ನ ಅನುಕೂಲಗಳು ಇತ್ಯಾದಿಯ ಬಗ್ಗೆ ಹಲವು ಸಲ ಪ್ರಶ್ನೆ-ಉತ್ತರಗಳ ಅವಧಿ ನಡೆದ ನಂತರ ಇವಳ ಈ ಪ್ರಶ್ನೆ, ಮುಂದೆ ಬರಲಿರುವ ಪ್ರಶ್ನೆಗೆ ಸಿದ್ದನಾಗುತ್ತಾ ನಾನು ಸುಸ್ತಾಗಿದ್ದೆ !

Thursday, September 14, 2006

ಪೈಂಟು, ಸುಣ್ಣ-ಬಣ್ಣ, ಪ್ರಾಣ

ಹೀಗೆ ಒಂದು ದಿನ ನಿದ್ದೆಗೆ ಹೊರಟಾಗ ನಮ್ಮ ಚಿಣ್ಣಾರಿಯ ಪ್ರಶ್ನೆ ಶುರುವಾಯಿತು ನೋಡಿ. ಸರಿ, ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು ಬಲ್ಲಿರಾ.. ಓದಿ ನೋಡಿ..

: ಅಪ್ಪಾ, ಗೋಡೆಗೆ ಬಳಿಯುವ ಪೈಂಟು ಹೇಗೆ ಕಂಡುಹಿಡಿದರು?

: ಹಿಂದಿನ ಕಾಲದಲ್ಲಿ ಗೋಡೆಯನ್ನು ಮಣ್ಣಿನಿಂದ ಮಾಡುತ್ತಿದ್ದ ಕಾರಣ ಗೋಡೆಗೆ ಗೆದ್ದಲು-ಇರುವೆ ಇತ್ಯಾದಿ ಕ್ರಿಮಿ ಕೀಟಗಳು ಬರುತ್ತಿದ್ದವು. ಶುರುಶುರುವಿಗೆ ಸೆಗಣಿಯನ್ನು ಗೋಡೆಗೆ ಬಳಿದು ಇವುಗಳ ಕಾಟವನ್ನು ಹೋಗಲಾಡಿಸಿದರೆ ಕ್ರಮೇಣ ಸುಣ್ಣವನ್ನು ಬಳಸಲು ಮನುಷ್ಯ ಕಲಿತ. ನಿಧಾನದಲ್ಲಿ ಮನುಷ್ಯ ಓದಿ ತಿಳಿದು ರಾಸಾಯನಿಕ ವಸ್ತುಗಳಿಂದ ವಿವಿಧ ಪ್ರಕಾರದ ಬಣ್ಣಗಳ ಪೈಂಟನ್ನು ಕಂಡು ಹಿಡಿದ. ಈಗೀಗ ಕ್ರಿಮಿಕೀಟಗಳ ಉಪದ್ರವ ಕಡಿಮೆಯಾಗಿ ಮನೆಯ ಸೌಂದರ್ಯವರ್ಧಕವಾಗಿ ಉಪಯೋಗಿಸುವುದೇ ಹೆಚ್ಚು.

ಮ: ಈಗ ನೀವು ಹೇಳಿದಿರಲ್ಲಾ, ಸುಣ್ಣ ಮಾಡುವುದು ಹೇಗೆ?

ಅ: ಸಮುದ್ರ ತೀರದಲ್ಲಿ ನೀನು ಸುಣ್ಣದ ಚಿಪ್ಪು ನೋಡಿದ್ದಿಯಾ? ಆ ಚಿಪ್ಪನ್ನು ಬಿಸಿನೀರಿನಲ್ಲಿ ಹಾಕಿದರೆ ಒಂದು ರೀತಿಯ ಬಿಳಿಯ ಬಣ್ಣದ ಪೈಂಟಾಗುವುದು. ಅದನ್ನು ಗೋಡೆಗೆ ಬಳಿದರೆ ಬಿಳಿಯ ಬಣ್ಣ ಬರುವುದು.

: ಹಾಗಾದರೆ ಬೇರೆ ಬಣ್ಣ ಬೇಕಾದರೆ?

: ಬೇರೆ ಏನಾದರೂ ಬಣ್ಣ ಹಾಕಿದರಾಯಿತು. ಉದಾಹರಣೆಗೆ ಬಟ್ಟೆ ಒಗೆಯುವ ನೀಲಿ ಹಾಕಿದರೆ ನೀಲಿ ಬಣ್ಣ ಬರುವುದು.

: ..... ಒಂದು ವೇಳೆ ಚಿಪ್ಪು ಬೇರೆ ಬಣ್ಣದಿದ್ದರೆ?

: $#%^&.....

: (ಸ್ವಲ್ಪ ಸಮಯ ಬಿಟ್ಟು) ಅಪ್ಪಾ, ಚಿಪ್ಪಿನೊಳಗೆ ಜೀವಿಯಿದ್ದರೆ?

: ಇಲ್ಲ, ಇರುವುದಿಲ್ಲ......

: ಹೇಗೆ ಗೊತ್ತು ನಿಮಗೆ?

: ಇಲ್ಲ ಮರಿ, ಇರುವುದಿಲ್ಲ..

: ಹೇಗೆ ಗೊತ್ತು ಅಂತ, ಎಲ್ಲಾ ಚಿಪ್ಪನ್ನು ನೋಡ್ತಾರಾ, ಪ್ರ್ರಾಣಿ ಇಲ್ಲ ಅಂತ?

: ..........

ನನ್ನ ಪರಿಸ್ಥಿತಿಯನ್ನು ನೀವೇ ಆಲೋಚಿಸಿ..
(೧೨ ಸೆಪ್ಟೆಂಬರ್ ೨೦೦೬)

Wednesday, September 13, 2006

ಯುರೋಪ್ ಹಾಗೂ ತಣ್ಣನೆ...

ಇತ್ತೀಚೆಗೆ ಯುರೋಪ್ ಗೆ ಹೋಗುವ ಪುನರವಕಾಶ ಬಂತು. ಅದೆಷ್ಟು ಸಲ ಹೋಗಿದ್ದೇನೋ, ಆದರೆ ಈ ವಿಷಯವನ್ನು ಇಲ್ಲಿ ಬರೆಯಲು ಈಗ ಸಮಯ ಬಂತು ನೋಡಿ. ಪ್ರತಿ ಸಲ ಹೋದಾಗಲೂ ಈ ವಿಚಿತ್ರವನ್ನು ಅನುಭವಿಸಿದ್ದೇನೆ. ಮೊದಲೇ ಯುರೋಪ್ ಅಂದರೆ ತಣ್ಣನೆ, ಯಾವಾಗಲೂ ಚಳಿ. ಇದರೆಲ್ಲರ ಮಧ್ಯೆ ಅಲ್ಲಿ ಸಿಗುವ ಆಹಾರವೂ ಬಹಳ ತಣ್ಣನೆ. ಒಂದು ಸ್ಯಾಂಡ್‍ವಿಚ್ ಕೇಳಿದರೆ ತಂಗಳು ಪೆಟ್ಟಿಗೆಯಿಂದ ತೆಗೆದು ಹಾಗೇ ಕೊಡುತ್ತಾರಪ್ಪಾ.. ! ನಾನು ಬಾಯಿಬಿಟ್ಟು ಮೈಕ್ರೋವೇವ್ ನಲ್ಲಿಟ್ಟು ಕೊಡುತ್ತಾರೋ ಎಂದು ಕಣ್ಣು ಬಿಟ್ಟು ನೋಡಿದ್ದೇ ಬಂತು ಅಷ್ಟೇ! ಅದು ಬಿಡಿ, ಈ ಯುರೋಪಿನ ಕೆಂಪುಕೋತಿಗಳು, ಬೀಳುತ್ತಿರುವ ಮಂಜಿನ ಮಧ್ಯೆಯೂ ಐಸ್ ಕ್ರೀಮ್ ತಿನ್ನುವುದು ನೋಡಬೇಕು ನೀವು ! ನನಗೆ ಈ ಜನರ ಈ ಪ್ರವೃತ್ತಿಯನ್ನು ಇಲ್ಲಿಯವರೆಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ.

Wednesday, August 16, 2006

ನೆಂಟತನ

ನಮ್ಮ ಮಕ್ಕಳು ದೊಡ್ಡವರಾಗುತ್ತಾ ಅವಿಭಕ್ತ, ವಿಭಕ್ತ ಕುಟುಂಬದ ವಿಚಾರ ಹೇಳಬೇಕಾಗಿ ಬರುವುದು ಸಹಜ. ಒಂದು ಬಾರಿ ಹೀಗೆ ಮಾತನಾಡುತ್ತಾ ನಮ್ಮ ಕುಟುಂಬ-ನೆಂಟರಿಷ್ಟರ ಸಂಬಂಧಗಳ ಬಗ್ಗೆ ವಿವರಿಸುವ ಸಂದರ್ಭ ಬಂತು. ಹೇಗೆ ನೆಂಟರು ಅಥವಾ ನಾವು ನೆಂಟರಾಗಿ ಕೆಲವು ದಿನಗಳ ಮಟ್ಟಿಗೆ ಅವರ ಮನೆಗೆ ಹೋಗಿ ಬರುವೆವು ಅನ್ನುವ ಉದಾಹರಣೆಯೂ ಬಂತು. ನಮ್ಮ ಪುಟಾಣಿ ಇದನ್ನೇ ಆದರಿಸಿಕೊಂಡು ಒಂದು ದಿನ ತನ್ನ ಅಮ್ಮನಲ್ಲಿ ಕೇಳಿಯೇ ಬಿಟ್ಟಳು...., ಪ್ರಸಂಗ: ಜೇನು ನೊಣಗಳ ಜೀವನ

ಪು: ಅಮ್ಮ, ಹೇಗೆ ಅಷ್ಟೂ ಜೇನು ನೊಣಗಳು ಹುಟ್ಟಿಕೊಂಡದ್ದು?

ಅ: ರಾಣಿ ಜೇನು ನೊಣ ಮೊಟ್ಟೆಯಿಟ್ಟು, ಮೊಟ್ಟೆಯೊಡೆದು ಮರಿಗಳಾದುವು.

ಪು: ಹಾಗಾದ್ರೆ, ತುಂಬಾ ನೊಣಗಳಾದ್ರೆ ಅವೆಲ್ಲಾ ಇರ್ಲಿಕೆ ಈ ಗೂಡಿನಲ್ಲಿ ಸಾಧ್ಯವಾ?

ಅ: ಇಲ್ಲ. ಆಗ ಅವು ಪಾಲಾಗಿ (ವಿಂಗಡನೆ) ಹೋಗ್ತವೆ.

ಪು: (ಸ್ವಲ್ಪ ಸಮಯ ಬಿಟ್ಟು) ಹಾಗಾದ್ರೆ ಪಾಲಾಗಿ ಹೋದ ಹುಳಗಳು ನೆಂಟ್ರಾಗಿ ಅವರ ಮೊದಲ ಗೂಡಿಗೆ ಬರ್ತಾವಾ..?

: ..........

Tuesday, August 15, 2006

ಹುಲಿ ತಿಂತದೆ !

ನಾನು: ನೋಡು ! ತಂಟೆ ಮಾಡಬೇಡ, ಕಾಡಿನಲ್ಲಿರುವ ಹುಲಿಗೆ ಕೊಡುತ್ತೇನೆ ಅಷ್ಟೇ !

ಅವಳು: ಹುಲಿ ತಿಂತದಾ?

ನಾನು: ಹೌದು ಮತ್ತೇ !

ಅವಳು: ಹಾಗಾದ್ರೆ, ಹುಲಿ non-veg..?

ನಾನು: ~!#*

ಅವಳು: (ಸ್ವಲ್ಪ ಸಮಯ ಬಿಟ್ಟು) ಅಪ್ಪ, ಹಾಗಾದ್ರೆ ಹುಲಿ ನನ್ನನ್ನು ಅಂಗಿ ತೆಗೆದು ತಿಂತದಾ ಅಥವಾ ಹಾಗೆಯಾ?....

ನಾನು ತಬ್ಬಿಬ್ಬು !