Friday, March 09, 2007

ಮೂಲಭೂತ ಪ್ರಶ್ನೆ !

ದೇವರು ಹಾಗೂ ನನ್ನ ಮಧ್ಯೆ ನಡೆಯುವ ಮಾತುಕತೆ ಅಷ್ಟಕ್ಕಷ್ಟೆ. ಯಾಕೆಂದರೆ ಅವನು ಮಾತನಾಡಲಾರ, ನಾನು ಮಾತನಾಡಿಸಲಾರೆ ! ನಮ್ಮ ಮಧ್ಯೆಈ ಕಂದರ ಮೊದಲಿನಿಂದಲೇ ಇದೆ. ಈ ಶೀತಲ ಸಮರ ಮೊದಲಿನಿಂದಲೇ ಇದ್ದರೂ ಅಪರೂಪಕ್ಕೊಮ್ಮೆ ದೇವಸ್ಥಾನಕ್ಕೆ ಭೇಟಿ ಕೊಡುವುದು ಬೆಳೆದುಬಂದಿದೆ. ಸ್ಥಳಾವಕಾಶ ಕಡಿಮೆಯಾದ ಈ ದೇಶದಲ್ಲಿ ಭಕ್ತರು ನಿರಾಶಾರಾಗದಂತೆ ಎಲ್ಲಾ ದೇವರನ್ನು ಒಂದೇ ಕಡೆ ಕೂಡಿಹಾಕಿರುತ್ತಾರೆ. ಯಾರಿಗೆ ಯಾವ ದೇವರು ಬೇಕೋ ಅವರು ಆ ದೇವರಿರುವಲ್ಲಿ ಹೋಗಿ ನಿಮ್ಮ ನಿವೇದನೆಯನ್ನು ಮಾಡಿಕೊಳ್ಳಬಹುದು. ಬಹುಶ: ಈ ದೆಸೆಯಿಂದ ದೇವರುಗಳ ಮಧ್ಯೆ ಮತ್ಸರ ಬಾರದಿದ್ದರೆ ಸಾಕು, ಅಷ್ಟೇ ! ವಿಷಯ ಪ್ರಸ್ತಾವನೆಯ ಮೊದಲು ಪೀಠಿಕೆಯೇ ಉದ್ದವಾದರೆ ಹೇಗೆ ಮಾರಾಯರೇ?

ಮೊನ್ನೆ ಸಂಕ್ರಾಂತಿಯ ಶುಭ ದಿನದಂದು ನನ್ನ ಪುಟ್ಟ ಮಗಳನ್ನು ಕರಕೊಂಡು ದೇಗುಲಕ್ಕೆ ಹೋಗಿದ್ದೆ.

ಅಲ್ಲಿ ಒಂದು ಕಡೆ ಕೆಂಪು ನಾಲಿಗೆ ಚಾಚಿಕೊಂಡಿರುವ ಕಾಳಿಯ ವಿಗ್ರಹ, ಇನ್ನೊಂದು ಕಡೆ ಹಿರಣ್ಯ ಕಷಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ನರಸಿಂಹನನ್ನು ನೋಡಿ ನನ್ನ ಮಗಳ ಪ್ರಶ್ನೆ, ’ಅಪ್ಪಾ, ದೇವರು ನಾನ್ ವೆಜ್..ಅ.. ?'

ಮನೆಯಲ್ಲಿ ನಾವೇಕೆ ವೆಜ್ - ವೆಜ್ ನ ಅನುಕೂಲಗಳು ಇತ್ಯಾದಿಯ ಬಗ್ಗೆ ಹಲವು ಸಲ ಪ್ರಶ್ನೆ-ಉತ್ತರಗಳ ಅವಧಿ ನಡೆದ ನಂತರ ಇವಳ ಈ ಪ್ರಶ್ನೆ, ಮುಂದೆ ಬರಲಿರುವ ಪ್ರಶ್ನೆಗೆ ಸಿದ್ದನಾಗುತ್ತಾ ನಾನು ಸುಸ್ತಾಗಿದ್ದೆ !