Thursday, September 14, 2006

ಪೈಂಟು, ಸುಣ್ಣ-ಬಣ್ಣ, ಪ್ರಾಣ

ಹೀಗೆ ಒಂದು ದಿನ ನಿದ್ದೆಗೆ ಹೊರಟಾಗ ನಮ್ಮ ಚಿಣ್ಣಾರಿಯ ಪ್ರಶ್ನೆ ಶುರುವಾಯಿತು ನೋಡಿ. ಸರಿ, ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು ಬಲ್ಲಿರಾ.. ಓದಿ ನೋಡಿ..

: ಅಪ್ಪಾ, ಗೋಡೆಗೆ ಬಳಿಯುವ ಪೈಂಟು ಹೇಗೆ ಕಂಡುಹಿಡಿದರು?

: ಹಿಂದಿನ ಕಾಲದಲ್ಲಿ ಗೋಡೆಯನ್ನು ಮಣ್ಣಿನಿಂದ ಮಾಡುತ್ತಿದ್ದ ಕಾರಣ ಗೋಡೆಗೆ ಗೆದ್ದಲು-ಇರುವೆ ಇತ್ಯಾದಿ ಕ್ರಿಮಿ ಕೀಟಗಳು ಬರುತ್ತಿದ್ದವು. ಶುರುಶುರುವಿಗೆ ಸೆಗಣಿಯನ್ನು ಗೋಡೆಗೆ ಬಳಿದು ಇವುಗಳ ಕಾಟವನ್ನು ಹೋಗಲಾಡಿಸಿದರೆ ಕ್ರಮೇಣ ಸುಣ್ಣವನ್ನು ಬಳಸಲು ಮನುಷ್ಯ ಕಲಿತ. ನಿಧಾನದಲ್ಲಿ ಮನುಷ್ಯ ಓದಿ ತಿಳಿದು ರಾಸಾಯನಿಕ ವಸ್ತುಗಳಿಂದ ವಿವಿಧ ಪ್ರಕಾರದ ಬಣ್ಣಗಳ ಪೈಂಟನ್ನು ಕಂಡು ಹಿಡಿದ. ಈಗೀಗ ಕ್ರಿಮಿಕೀಟಗಳ ಉಪದ್ರವ ಕಡಿಮೆಯಾಗಿ ಮನೆಯ ಸೌಂದರ್ಯವರ್ಧಕವಾಗಿ ಉಪಯೋಗಿಸುವುದೇ ಹೆಚ್ಚು.

ಮ: ಈಗ ನೀವು ಹೇಳಿದಿರಲ್ಲಾ, ಸುಣ್ಣ ಮಾಡುವುದು ಹೇಗೆ?

ಅ: ಸಮುದ್ರ ತೀರದಲ್ಲಿ ನೀನು ಸುಣ್ಣದ ಚಿಪ್ಪು ನೋಡಿದ್ದಿಯಾ? ಆ ಚಿಪ್ಪನ್ನು ಬಿಸಿನೀರಿನಲ್ಲಿ ಹಾಕಿದರೆ ಒಂದು ರೀತಿಯ ಬಿಳಿಯ ಬಣ್ಣದ ಪೈಂಟಾಗುವುದು. ಅದನ್ನು ಗೋಡೆಗೆ ಬಳಿದರೆ ಬಿಳಿಯ ಬಣ್ಣ ಬರುವುದು.

: ಹಾಗಾದರೆ ಬೇರೆ ಬಣ್ಣ ಬೇಕಾದರೆ?

: ಬೇರೆ ಏನಾದರೂ ಬಣ್ಣ ಹಾಕಿದರಾಯಿತು. ಉದಾಹರಣೆಗೆ ಬಟ್ಟೆ ಒಗೆಯುವ ನೀಲಿ ಹಾಕಿದರೆ ನೀಲಿ ಬಣ್ಣ ಬರುವುದು.

: ..... ಒಂದು ವೇಳೆ ಚಿಪ್ಪು ಬೇರೆ ಬಣ್ಣದಿದ್ದರೆ?

: $#%^&.....

: (ಸ್ವಲ್ಪ ಸಮಯ ಬಿಟ್ಟು) ಅಪ್ಪಾ, ಚಿಪ್ಪಿನೊಳಗೆ ಜೀವಿಯಿದ್ದರೆ?

: ಇಲ್ಲ, ಇರುವುದಿಲ್ಲ......

: ಹೇಗೆ ಗೊತ್ತು ನಿಮಗೆ?

: ಇಲ್ಲ ಮರಿ, ಇರುವುದಿಲ್ಲ..

: ಹೇಗೆ ಗೊತ್ತು ಅಂತ, ಎಲ್ಲಾ ಚಿಪ್ಪನ್ನು ನೋಡ್ತಾರಾ, ಪ್ರ್ರಾಣಿ ಇಲ್ಲ ಅಂತ?

: ..........

ನನ್ನ ಪರಿಸ್ಥಿತಿಯನ್ನು ನೀವೇ ಆಲೋಚಿಸಿ..
(೧೨ ಸೆಪ್ಟೆಂಬರ್ ೨೦೦೬)

Wednesday, September 13, 2006

ಯುರೋಪ್ ಹಾಗೂ ತಣ್ಣನೆ...

ಇತ್ತೀಚೆಗೆ ಯುರೋಪ್ ಗೆ ಹೋಗುವ ಪುನರವಕಾಶ ಬಂತು. ಅದೆಷ್ಟು ಸಲ ಹೋಗಿದ್ದೇನೋ, ಆದರೆ ಈ ವಿಷಯವನ್ನು ಇಲ್ಲಿ ಬರೆಯಲು ಈಗ ಸಮಯ ಬಂತು ನೋಡಿ. ಪ್ರತಿ ಸಲ ಹೋದಾಗಲೂ ಈ ವಿಚಿತ್ರವನ್ನು ಅನುಭವಿಸಿದ್ದೇನೆ. ಮೊದಲೇ ಯುರೋಪ್ ಅಂದರೆ ತಣ್ಣನೆ, ಯಾವಾಗಲೂ ಚಳಿ. ಇದರೆಲ್ಲರ ಮಧ್ಯೆ ಅಲ್ಲಿ ಸಿಗುವ ಆಹಾರವೂ ಬಹಳ ತಣ್ಣನೆ. ಒಂದು ಸ್ಯಾಂಡ್‍ವಿಚ್ ಕೇಳಿದರೆ ತಂಗಳು ಪೆಟ್ಟಿಗೆಯಿಂದ ತೆಗೆದು ಹಾಗೇ ಕೊಡುತ್ತಾರಪ್ಪಾ.. ! ನಾನು ಬಾಯಿಬಿಟ್ಟು ಮೈಕ್ರೋವೇವ್ ನಲ್ಲಿಟ್ಟು ಕೊಡುತ್ತಾರೋ ಎಂದು ಕಣ್ಣು ಬಿಟ್ಟು ನೋಡಿದ್ದೇ ಬಂತು ಅಷ್ಟೇ! ಅದು ಬಿಡಿ, ಈ ಯುರೋಪಿನ ಕೆಂಪುಕೋತಿಗಳು, ಬೀಳುತ್ತಿರುವ ಮಂಜಿನ ಮಧ್ಯೆಯೂ ಐಸ್ ಕ್ರೀಮ್ ತಿನ್ನುವುದು ನೋಡಬೇಕು ನೀವು ! ನನಗೆ ಈ ಜನರ ಈ ಪ್ರವೃತ್ತಿಯನ್ನು ಇಲ್ಲಿಯವರೆಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ.